ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್‍ಯಕ್ರಮ

ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಕಲಿಕೆಯ ಜೊತೆಗೆ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಎಂದು ಜಿ.ಎಲ್. ಗ್ರೂಪ್ ಆಫ್ ಕಂಪೆನೀಸ್ ಇದರ ಆಡಳಿತ ಪಾಲುದಾರರಾದ ಸುಧನ್ವ ಆಚಾರ್ಯ ಹೇಳಿದರು.

ನರೇಂದ್ರ ಪ.ಪೂ. ಕಾಲೇಜಿನಲ್ಲಿ 2022-23 ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್‍ಯಕ್ರಮದ ಮುಖ್ಯ ಅತಿಥಿಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಇದರ ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ ಮಾತನಾಡಿ ನಾಯಕತ್ವದ ಬೆಳವಣಿಗೆಗೆ ಹಾಗೂ ಆರೋಗ್ಯಯುತ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ವಿದ್ಯಾರ್ಥಿ ಸಂಘಗಳು ಮಾರ್ಗಸೂಚಿಗಳಾಗಲಿವೆ. ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸಬಲ್ಲ ಶಕ್ತಿ ಇರುವ ವಿದ್ಯಾರ್ಥಿ ಜೀವನದಲ್ಲಿ,  ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯ. ಜಗತ್ತಿನ ಕತ್ತಲೆಯನ್ನು ಹೋಗಲಾಡಿಸುವ ಅಗಾಧ ಶಕ್ತಿ ವಿದ್ಯಾರ್ಥಿಗಳಲ್ಲಿದೆ. ಉತ್ತಮ ನಾಯಕತ್ವ ಗುಣಮಟ್ಟವನ್ನು ಬೆಳೆಸಿಕೊಂಡಾಗ ಪ್ರಪಂಚವನ್ನೇ ಬದಲಿಸುವಂತಹ ಪ್ರಜೆಗಳಾಗಬಹುದು  ಎಂದು ಹೇಳಿದರು.

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನರೇಂದ್ರ ಪ. ಪೂ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯರವರು ಮಾತನಾಡುತ್ತಾ ಜೀವನದಲ್ಲಿ ವಿದ್ಯಾರ್ಥಿಗಳು ಕಲಿಕೆಯ ಗುಣಮಟ್ಟವನ್ನು ವೃದ್ಧಿಸಿ ಏಕತೆಯಿಂದ ಒಗ್ಗೂಡಿಕೊಂಡು ನಿರಂತರ ಪರಿಶ್ರಮದಿಂದ ಸಾಧಿಸಬೇಕಾದ ಅನಿವಾರ್‍ಯತೆಯಿದೆ. ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು ವಿದ್ಯಾರ್ಥಿಗಳಿಗೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಂಘವು ಹೆಜ್ಜೆ ಹಾಕಬೇಕು ಎಂದು ಹೇಳಿದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಬೋಧಿಸಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕನಾದ ದ್ವಿತೀಯ ವಿಜ್ಞಾನ ವಿಭಾಗದ ಮಹೇಶ್ ಪ್ರಸಾದ್, ಕಾರ್‍ಯದರ್ಶಿಯಾದ ದೀಕ್ಷ, ಜೊತೆ ಕಾರ್‍ಯದರ್ಶಿಯಾದ ಚೈತ್ರಾ ಸಿ.ಕೆ. ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಕಾಲೇಜಿನ ನಿಯಮಗಳಿಗೆ ಶಾಸನಗಳಿಗೆ ಬದ್ಧರಾಗಿ ಪಾಲನೆ ಮಾಡುತ್ತೇವೆ ಮತ್ತು ಕಾಲೇಜಿನ ಅಭಿವೃದ್ಧಿಗಾಗಿ ಪ್ರಗತಿಗಾಗಿ ಶ್ರಮಿಸುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಿದರು. ಜೊತೆಗೆ ವಿಜ್ಞಾನ ಸಂಘ ಮತ್ತು ವಾಣಿಜ್ಯ ಸಂಘದ 2022-23 ನೇ ಸಾಲಿನ ಚಟುವಟಿಕೆಗಳ ಪಟ್ಟಿಯನ್ನು ಮತ್ತು ಅದರ ವರದಿಯನ್ನು ದ್ವಿತೀಯ ವಿಜ್ಞಾನ ವಿಭಾಗದ ಅನ್ವಿತಾ ಮತ್ತು ವಾಣಿಜ್ಯ ವಿಭಾಗದ ಸುಭಾಷಿತಾ ಓದಿದರು.

ಕಾರ್‍ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಭೂಮಿಕಾ ಸ್ವಾಗತಿಸಿ, ದ್ವಿತೀಯ ವಿಜ್ಞಾನ ವಿಭಾಗದ ಮಹೇಶ್ ಪ್ರಸಾದ್ ವಂದಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಅಂಕಿತಾ ಕಾರ್‍ಯಕ್ರಮವನ್ನು ನಿರೂಪಿಸಿದರು.