ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್‍ಯಕ್ರಮ

ಭಾರತವು ತನ್ನ ಸ್ವಾತಂತ್ರ್ಯ ದಿನವನ್ನು ಪ್ರತೀವರ್ಷ ಆಗಸ್ಟ್ 15 ರಂದು ಸ್ಮರಿಸುತ್ತದೆ. ಈ ವರ್ಷ ನಮ್ಮ ಸ್ವಾತಂತ್ರ್ಯ ಹೋರಾಟದ ಪರಾಕಾಷ್ಠೆಯ 75 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ. ನಮ್ಮ ರಾಷ್ಟ್ರವನ್ನು ವಿಮೋಚನೆಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ನಾಯಕರ ತ್ಯಾಗವನ್ನು ಸ್ಮರಿಸಲು ಜನರು ಒಟ್ಟಾಗಿ ಸೇರುತ್ತಾರೆ. ನಮ್ಮ ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು. ಎಂದು ಭಾರತೀಯ ನೌಕಾಪಡೆಯ ನಿವೃತ್ತ ಯೋಧರಾದ ಜಗನ್ನಾಥ ರೈ ಹೇಳಿದರು.

ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವೈವಿಧ್ಯಮಯ ಸಮಾಜದಲ್ಲಿ ಭಾರತವು ಈ ಮಹತ್ವದ ಸಂದರ್ಭವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಯುವ ಮನಸ್ಸುಗಳಲ್ಲಿ ದೇಶಾಭಿಮಾನದ ಕಿಚ್ಚನ್ನು ಹೆಚ್ಚಿಸುವ ಕಾರ್‍ಯದಲ್ಲಿ ತೊಡಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ದಿನವು ದೇಶಾದ್ಯಂತ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಬಲವಾದ ಅರ್ಥದಿಂದ ಗುರುತಿಸಲ್ಪಟ್ಟಿದೆ. ಈ ದಿನವು ದೇಶದ ವೈವಿಧ್ಯತೆಯಲ್ಲಿ ನಮ್ಮ ಹೆಮ್ಮೆ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರಸೇವೆಗೆ ಮತ್ತು ಸಮಾಜದ ಸುಧಾರಣೆಗೆ ಪೂರಕವಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಪುತ್ತೂರಿನ ಡಾ. ಪ್ರದೀಪ್ ಕುಮಾರ್‍ಸ್ ಹಾಸ್ಪಿಟಲ್ ಆಫ್ ಆಯುರ್ವೇದ ಇದರ ಸ್ಥಾಪಕರು ಮತ್ತು ಖ್ಯಾತ ಆಯುರ್ವೇದ ವೈದ್ಯರಾದ ಡಾ. ಪ್ರದೀಪ್‌ಕುಮಾರ್ ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆಕಾರ್‍ಯದರ್ಶಿಗಳಾದ ಶ್ರೀಮತಿ ರೂಪಲೇಖ, ನರೇಂದ್ರ ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ, ಸಂಚಾಲಕರಾದ ಸಂತೋಷ ಬಿ., ಸದಸ್ಯರಾದ ಶ್ರೀಮತಿ ಮೋಹಿನಿ ದಿವಾಕರ, ಸಂಪತ್ ಕುಮಾರ್ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸ ಮತ್ತು ಉಪನ್ಯಾಸಕೇತರ ವೃಂದ, ವಿದ್ಯಾರ್ಥಿ ಸಂಘದ ನಾಯಕ ಮತ್ತು ಪದಾಧಿಕಾರಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್‍ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಉಪನ್ಯಾಸಕರಾದ ಶ್ರೀಮತಿ ರೇಣುಕಾ ವಂದಿಸಿದರು. ಶ್ರೀಮತಿ ಶಶಿಕಲಾ ಕಾರ್‍ಯಕ್ರಮವನ್ನು ನಿರೂಪಿಸಿದರು.