ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಚೈತನ್ಯ ಕಾರ್ಯಾಗಾರ – ಸೌರಭ ಸಮಾರೋಪ ಸಮಾರಂಭ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಮೋಹಿನಿ ದಿವಾಕರರವರು ಮಾತನಾಡುತ್ತಾ ಮಾನವೀಯ ಮೌಲ್ಯಗಳ ಜೊತೆಗೆ ತಾನು ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆಯಬೇಕು ಎನ್ನುವ ಪ್ರೇರಣೆಯೊಂದಿಗೆ ಜೀವನವನ್ನು ಧೈರ್ಯದಿಂದ ಎದುರಿಸಬಲ್ಲೆ ಎನ್ನುವ ಕಾಳಜಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಚೈತನ್ಯ ಕಾರ್ಯಾಗಾರ ಸೌರಭ ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣ ಮೋಹನ್ ರವರು ಮಾತನಾಡುತ್ತಾ ವಿದ್ಯಾರ್ಥಿ ಸಾಧಕನಾಗಬೇಕಾದರೆ ಒಳ್ಳೆಯ ಹವ್ಯಾಸಗಳ ಜೊತೆಗೆ ಕ್ರಿಯಾಶೀಲರಾಗಿ ಅಭ್ಯಾಸದ ಕಡೆ ಗಮನಹರಿಸಿದರೆ ಮಾತ್ರ ಉತ್ತಮ ಭವಿಷ್ಯತ್ತಿಗೆ ನಾಂದಿಯಾಗುತ್ತದೆ. ವಿದ್ಯಾರ್ಥಿಗಳು ಈ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ಸಾಗಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಎರಡು ಅವಧಿಗಳನ್ನಾಗಿ ಆಯೋಜಿಸಲಾಗಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವ ಬಗೆ,ಯಾವುದೇ ಒತ್ತಡವಿಲ್ಲದೆ ನಿರಾತಂಕವಾಗಿ ಏಕಾಗ್ರತೆಯಿಂದ ಓದುವ ಬಗ್ಗೆ ಮತ್ತು ಎಸ್.ಎಸ್.ಎಲ್.ಸಿ ಯ ನಂತರ ಯಾವ ಕೋರ್ಸ್­ಗಳನ್ನು ಮಾಡಬಹುದು, ವಿದ್ಯಾರ್ಥಿಗಳ ಮುಂದಿರುವ ಬೇರೆ ಬೇರೆ ಅವಕಾಶಗಳ ಬಗ್ಗೆ ಮಾಹಿತಿಯನ್ನು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿಯ ಅಸಿಸ್ಟೆಂಟ್ ಪ್ರೊಫೆಸರ್­ಗಳಾದ ಶ್ರೀಮತಿ ವಂದನಾ ಶಂಕರ್, ಡಾ. ಸುನಿಲ್ ಕುಮಾರ್ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣ ಮೋಹನ್ ನೀಡಿದರು.

ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಆಕರ್ಷಕ ಮೋಜಿನ ಆಟಗಳನ್ನು ಏರ್ಪಡಿಸಿದ್ದರು.

ಕಾಲೇಜಿನಿಂದ ಆನ್ಲೈನ್­ನಲ್ಲಿ ನಡೆಸಿದ ಉತ್ಕರ್ಷ-2022 ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳು ಈ ಕಾರ್‍ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಪ್ರತೀ ವರ್ಷವು ಇಂತಹ ಕಾರ್ಯಗಾರಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ನಿರೀಕ್ಷಿಸಿದ ಉತ್ತಮ ಫಲಿತಾಂಶವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಸೌಮ್ಯ ಸ್ವಾಗತಿಸಿ, ಶ್ರೀಮತಿ ಶೈಲಾ ವಂದಿಸಿದರು. ಕಾರ್‍ಯಕ್ರಮವನ್ನು ಶ್ರೀಮತಿ ಅಕ್ಷತಾ ನಿರೂಪಿಸಿದರು.