ಒಂದು ದೇಶದ ಯಾವುದೇ ಆರ್ಥಿಕ ಪ್ರಗತಿಗೆ ವಾಣಿಜೋದ್ಯಮ ಅಗತ್ಯವಾಗಿದೆ. ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತದೆ ಮತ್ತು ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಯಶಸ್ ಘಟಕದ ಅಧ್ಯಕ್ಷರಾದ ಕೃಷ್ಣ ನಾರಾಯಣ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಬಾಳೆನಾರಿನಿಂದ ತಯಾರಿಸಬಹುದಾದ ಉತ್ಪನ್ನಗಳ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಳೆಗಿಡದ ನಾರನ್ನು ತೆಗೆದು ವಿವಿಧ ಉತ್ಪನ್ನಗಳನ್ನು ತಯಾರಿಸುವ ಉದ್ಯಮ ಜನಪ್ರಿಯವಾಗಿದ್ದು,ಸಣ್ಣ ಉದ್ಯಮ ನಡೆಸುವವರಿಗೆ, ಮಹಿಳೆಯರಿಗೆ ಒಂದು ಉತ್ತಮ ಆದಾಯ ತಂದುಕೊಡಬಲ್ಲ ಉದ್ಯಮವಾಗಿದೆ. ಎಂದು ತಮಿಳುನಾಡಿನ ಕೊಯಮತ್ತೂರಿನ ಇಕೋ ಗ್ರೀನ್ ಯುನಿಟ್ನ ಎಸ್.ಕೆ.ಬಾಬು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ಸಣ್ಣ ಉದ್ಯಮಕ್ಕೆ ಉತ್ತಮ ಮಾರುಕಟ್ಟೆಯು ಲಭ್ಯವಿದೆ. ಕೊಯಮತ್ತೂರಿನ ಇಕೋ ಗ್ರೀನ್ ಯುನಿಟ್ ಸಂಸ್ಥೆ ಈ ಉದ್ಯಮಕ್ಕೆ ಬೇಕಾದ ಪೂರಕ ತಂತ್ರಜ್ಞಾನವನ್ನು, ಯಂತ್ರೋಪಕರಣಗಳನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಕೃಷ್ಣಮೋಹನ್ ಅವರು ಮಾತನಾಡಿ ಈ ಉದ್ಯಮವನ್ನು ಅಲ್ಲಲ್ಲಿ ವಿಸ್ತರಿಸುವ ಪ್ರಯುಕ್ತ ಎಲ್ಲೆಡೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಸರಕಾರದ ಮುದ್ರಾ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವು ದೊರೆಯುತ್ತದೆ. ಇಂದಿನ ಯುವ ಜನತೆ ಅದರ ಸದುಪಯೋಗವನ್ನು ಪಡೆದು, ಇದನ್ನೊಂದು ಉಪ ಉದ್ಯಮವಾಗಿಯೂ ಮಾಡಿಕೊಳ್ಳಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ನರೇಂದ್ರ ಪ.ಪೂ. ಕಾಲೇಜಿನ ಸಂಚಾಲಕರಾದ ಸಂತೋಷ ಬಿ., ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಪ್ರವಾಸೋದ್ಯಮ ಸಲಹೆಗಾರರಾದ ಶ್ರೀಮತಿ ಮಹೇಶ್ವರಿ, ಜಗದೀಶ ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಅಕ್ಷತಾ ಸ್ವಾಗತಿಸಿ, ಶ್ರೀಮತಿ ಕೃತಿಕಾ ವಂದಿಸಿದರು.