ಭಾರತೀಯ ಸಂಸ್ಕೃತಿಯ ಅನಾವರಣದಲ್ಲಿ ವಿನೂತನ ಹೆಜ್ಜೆ

ತುಳಸಿ ಶುದ್ಧತೆಯ ಪ್ರತೀಕ. ತುಳಸಿ ಗಿಡವಿರುವ ಪ್ರದೇಶ, ತುಳಸಿಗಿಡವನ್ನು ಹೊಂದಿರುವ ಅಂಗಳ ಏಕಾಗ್ರತೆಯನ್ನು ಪ್ರೇರೇಪಿಸುವಂತಹ ಸ್ಥಳಗಳಾಗಿರುತ್ತವೆ. ಅಲ್ಲಿ ಧನಾತ್ಮಕ ಶಕ್ತಿಗಳ ಹರಿವು ಹೆಚ್ಚಾಗಿರುವುದರಿಂದ ಧಾರ್ಮಿಕವಾಗಿಯೂ ಅತ್ಯಂತ ಪವಿತ್ರತೆಯಿಂದ ಕೂಡಿರುತ್ತದೆ. ಭಾರತೀಯರು ಪ್ರಕೃತಿ ಪ್ರಿಯರು. ನಿಸರ್ಗಆರಾಧಕರು. ನದಿ, ಬೆಟ್ಟ, ಗುಡ್ಡ, ಕಾಡು, ಗಿಡ-ಮರಗಳು ಮತ್ತು ಪ್ರಾಣಿ ಪಶುಗಳಲ್ಲಿಯೂ ಪೂಜ್ಯ ಭಾವನೆಯನ್ನು ಕಾಣುವುದು ನಮ್ಮಧರ್ಮ-ಸಂಸ್ಕೃತಿಯಲ್ಲಿ ಅಡಗಿರುವುದು. ಇವೆಲ್ಲವುಗಳನ್ನು ಆರಾಧನೆ ಮಾಡುವ ಶ್ರದ್ಧೆಯ ಕಲ್ಪನೆ ಹೊತ್ತು ಮೆರೆಯುತ್ತಿದೆ ನಮ್ಮ ಸಂಸ್ಕೃತಿ. ಇಂತಹ ಸಂಸ್ಕೃತಿಯ ಅರಿವನ್ನು ಇಂದಿನ ಯುವಜನಾಂಗದಲ್ಲಿ ಮೂಡಿಸುವ ಕೆಲಸವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳು ಮಾಡುತ್ತಿದೆ ಎಂದು ಪುರೋಹಿತರಾದ ಕಾರ್ತಿಕ್ ಶಾಸ್ತ್ರಿ ಖಂಡೇರಿ ಹೇಳಿದರು.

ಧಾರ್ಮಿಕ ಪ್ರಾಮುಖ್ಯತೆಯೊಂದಿಗೆ ವೈದ್ಯಕೀಯ ಶಾಸ್ತ್ರದಲ್ಲಿ ತುಳಸಿ ಗಿಡದ ಅವಶ್ಯಕತೆಯ ಬಗ್ಗೆ ತಿಳಿಸಿದರು.ಹಿಂದೂ ಧರ್ಮದಲ್ಲಿ ತುಳಸಿಯ ಆರಾಧನೆಯ ಹಿಂದಿರುವ ಮಹತ್ವದ ಕಾರಣಗಳನ್ನು ತಿಳಿಸಿದರು.

ನರೇಂದ್ರ ಪ.ಪೂ. ಕಾಲೇಜಿನಲ್ಲಿ ನೂತನ ತುಳಸಿ ಕಟ್ಟೆಯನ್ನು ಸ್ಥಾಪಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತುಳಸಿ ಗಿಡವನ್ನು ನೆಡುವ ಶುಭಸಮಾರಂಭದಲ್ಲಿ ಅವರು ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರಸನ್ನ ಕುಮಾರ್ ರವರು ತುಳಸಿಕಟ್ಟೆಯನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿದರು.

ತುಲನೆಗೆ ಸಿಗದ ಶಕ್ತಿ ತುಳಸಿ. ತುಳಸಿಯು ಅತ್ಯಂತ ಪವಿತ್ರ ಹಾಗೂ ದೈವ ಶಕ್ತಿಯನ್ನು ಪಡೆದುಕೊಂಡ ಸಸ್ಯ. ಅದನ್ನು ಜೀವಾಮೃತ ಎಂದೇ ಕರೆಯಲಾಗುತ್ತದೆ. ವಿದ್ಯಾಸಂಸ್ಥೆಗಳಲ್ಲಿ ತುಳಸಿ ಕಟ್ಟೆಯನ್ನು ಸ್ಥಾಪಿಸಿ ಶಾಸ್ತ್ರೋಕ್ತವಾಗಿ ತುಳಸಿ ಗಿಡವನ್ನು ನೆಟ್ಟು ಅದನ್ನು ಆರಾಧಿಸುವ ಮೂಲ ಉದ್ದೇಶ ಇಂದಿನ ಯುವ ಪೀಳಿಗೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮತ್ತು ಮೈಗೂಡಿಸಿಕೊಂಡು ಗುರು ಹಿರಿಯರ ಮಾರ್ಗದರ್ಶನದಲ್ಲಿ ಅದನ್ನು ಮುನ್ನಡೆಸಬೇಕು ಎಂಬುವುದೇ ಆಗಿದೆ ಎಂದು ಸಂಸ್ಕಾರ-ಭಾರತಿಯ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಪದ್ಮ ಆಚಾರ್ಯ ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿಯಾದ ಶ್ರೀಮತಿ ರೂಪಲೇಖ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ, ಸಂಚಾಲಕರಾದ ಸಂತೋಷ ಬಿ., ಸದಸ್ಯರಾದ ಸೂರ್ಯನಾಥ ಆಳ್ವ, ಕೇಶವ ಮೂರ್ತಿ ಡಿ., ಶ್ರೀಮತಿ ಮೋಹಿನಿ ದಿವಾಕರ, ಸಂಪತ್ ಕುಮಾರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಗೌಡ, ಉಪಾಧ್ಯಕ್ಷರಾದ ದಿವಾಕರ ಬಲ್ಲಾಳ ಮತ್ತು ಎಲ್ಲಾ ಸದಸ್ಯರು, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್,ಎಲ್ಲಾ ಪೋಷಕರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.