ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರವು ಅತೀ ಮುಖ್ಯವಾಗಿರುತ್ತದೆ. ಕಾಲೇಜಿನ ಪ್ರಗತಿಯ ಹಾದಿಯಲ್ಲಿ ಶ್ರಮಿಸಲು ಬೇಕಾದ ಒಂದು ಅವಕಾಶವನ್ನು ಇಂತಹ ರಕ್ಷಕ-ಶಿಕ್ಷಕ ಸಂಘಗಳು ಒದಗಿಸಿಕೊಡುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಶ್ರೀಮತಿ ವಿಜಯಲಕ್ಷ್ಮಿ ಇವರು ಹೊಸದಾಗಿ ಚುನಾಯಿತರಾದ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸುತ್ತಾ ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ 2020-21 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಲೇಖರವರು ಮಾತನಾಡುತ್ತಾ, ಶಿಕ್ಷಕರು ಮತ್ತು ಪೋಷಕರಿಂದ ಸಮಾನ ರೀತಿಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ದೊರೆತಾಗ ವಿದ್ಯಾರ್ಥಿಗಳ ಭವಿಷ್ಯದ ಬುನಾದಿಗೆ ಸುಲಭವಾಗುತ್ತದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ರಕ್ಷಕ-ಶಿಕ್ಷಕ ಸಂಘದ ನೂತನ ಅಧ್ಯಕ್ಷರಾದ ರಾಜಗೋಪಾಲ ಪ್ರಭು ಇವರು ವಿದ್ಯಾರ್ಥಿಗಳ ಅಭಿವೃದ್ಧಿಯ ಬಗ್ಗೆ ಹಾಗೂ ಸಂಸ್ಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಎಲ್ಲಾ ಪೋಷಕರ ಪರವಾಗಿ ಮಾತನಾಡಿ ವ್ಯಕ್ತಪಡಿಸಿದರು. ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗಾಗಿ ತಮ್ಮೆಲ್ಲರ ಸಹಕಾರ ಇರುವುದಾಗಿ ಭರವಸೆ ನೀಡಿದರು.
2020-21 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ರಚನೆ ಪೋಷಕರ ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಅಧ್ಯಕ್ಷರಾಗಿ ರಾಜಗೋಪಾಲ ಪ್ರಭು, ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಮತ್ತು ಕೃಷ್ಣಪ್ಪ ಗೌಡ, ಹಾಗೆಯೇ ಮಕ್ಕಳ ರಕ್ಷಣಾ ಅಧಿಕಾರಿಯಾಗಿ ಶ್ರೀಮತಿ ಉಷಾ ಎಸ್. ಭಟ್ ಮತ್ತು ಕೆಲವರು ಸದಸ್ಯರಾಗಿ ಆಯ್ಕೆಗೊಂಡರು.
ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಕಾಂತ ಕೊಳತ್ತಾಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಾಲೇಜಿನ ಕೋಶಾಧಿಕಾರಿಯಾದ ಭಾಸ್ಕರ್ ರಾವ್ ಲೆಕ್ಕಪತ್ರ ಮಂಡನೆ ಮಾಡಿದರು. ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪೋಷಕರು ಸಂಸ್ಥೆಯ ಅಭಿವೃದ್ಧಿಗೆ ರಕ್ಷಕ-ಶಿಕ್ಷಕ ಸಂಘದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. ಸಂಸ್ಥೆಯ ಚಟುವಟಿಕೆಗಳ ಕುರಿತಾದ ಮಾಹಿತಿಯನ್ನು ಪೋಷಕರ ಮುಂದೆ ಇರಿಸಿದರು.
ಉಪನ್ಯಾಸಕಿಯಾದ ಶ್ರೀಮತಿ ಸೌಮ್ಯ ವಂದಿಸಿದರು. ಉಪನ್ಯಾಸಕರಾದ ಶ್ರೀಮತಿ ಮಧುರಾ ಕಾರ್ಯಕ್ರಮವನ್ನು ನಿರೂಪಿಸಿದರು.