ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು.ಎಂದು ಸರಕಾರಿ ಪದವಿ ಕಾಲೇಜು ಉಪ್ಪಿನಂಗಡಿ ಇದರ ಪ್ರಾಧ್ಯಾಪಕರಾದ ಪ್ರೊ. ವಿ. ಜಿ. ಭಟ್ ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ವಿದ್ಯಾರ್ಥಿಗಳಿಗೆ ಕೆಲವು ನಿದರ್ಶನಗಳ ಮೂಲಕ ತಮ್ಮದೇ ಜೀವನದ ಕೆಲವೊಂದು ಅನುಭವದ ಘಟನೆಗಳನ್ನು ವಿವರಿಸಿ ಶುಭನುಡಿಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನರೇಂದ್ರ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಲೇಖರವರು ಮಾತನಾಡುತ್ತಾ, ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನರೇಂದ್ರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಇವರು ವಿದ್ಯಾರ್ಥಿಗಳಿಗೆ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತಾ, ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಇದರಿಂದ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳಿದರು.
ಕಾಲೇಜಿನ ಉಪನ್ಯಾಸಕರು ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನಸ್ವರೂಪಿಯಾದ ದೀಪವನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಥಮ್ ಸ್ವಾಗತಿಸಿ, ಕಾರ್ತಿಕ್ ಪ್ರಸಾದ್ ವಂದಿಸಿದರು. ಪ್ರಥಮ ವಾಣಿಜ್ಯ ವಿಭಾಗದ ಕು. ಕಾವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.