ಭಾರತದ ಬಗ್ಗೆ ಮಾತನಾಡುವಾಗ ಸ್ವಾಭಾವಿಕವಾಗಿ ಆತ್ಮದೊಳಗಿನಿಂದ ಉತ್ಸಾಹ, ಭಾವುಕತೆ, ದೇಶಾಭಿಮಾನ ಮೂಡಿ ಬರುತ್ತದೆ. ಭಾರತಕ್ಕೆ ಭಾರತವೇ ಸಾಟಿ. ಏಕೆಂದರೆ ತನಗೆ ಎದುರಾದ ಎಲ್ಲಾ ವಿಷಮ ಸಂದರ್ಭಗಳಲ್ಲೂ ತಾಳ್ಮೆಯಿಂದ ತನ್ನ ಅಂತಃಶ್ಚೈತನ್ಯವನ್ನು ಕೂಡಿಕೊಂಡು ಎದ್ದು ನಿಲ್ಲುತ್ತದೆಯೇ ಹೊರತು ಕುಗ್ಗುವುದಿಲ್ಲ. ಭಾರತದಲ್ಲಿ ನೂರಕ್ಕೂ ಹೆಚ್ಚು ಭಾಷೆಗಳಿವೆ, ಅನೇಕ ಅಪ್ರಮುಖ ಲಿಪಿ ವ್ಯವಸ್ಥೆಗಳು, ಅಸಂಖ್ಯಾತ ಕುಲ ಪಂಗಡಗಳಿಂದೊಡಗೂಡಿದ ಅನೇಕ ಪ್ರಾಚೀನ ಮತ ಧರ್ಮಗಳು, ಬಗೆ ಬಗೆಯ ಭೂ ಪ್ರದೇಶಗಳು, ನಾನಾ ತೆರನಾದ ಹವಾಗುಣಗಳು ಇವೇ ಮುಂತಾದವುಗಳಿಂದಾದ ಜಾಲ ನಿರ್ಮಾಣವಾಗಿದೆ.
ನಮ್ಮ ಆಹಾರ ಪದ್ಧತಿ, ಉಳಿಸಿಕೊಂಡು ಬಂದಿರುವ ಸಂಪ್ರದಾಯಗಳು, ಹಿರಿಯರಿಗೆ ನೀಡುವ ಆದರ ಗೌರವ ಮುಂತಾದ ಭಾರತೀಯ ಸಂಸ್ಕೃತಿಯ ಕೆಲವು ವಿಧಾನಗಳು ವಿದೇಶಿಯರನ್ನೂ ಅಪಾರವಾಗಿ ಭಾರತದತ್ತ ಆಕರ್ಷಿಸಿಸುತ್ತದೆ. ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಇಷ್ಟೊಂದು ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಹೀಗೆ ಒಂದೊಂದು ವಿಷಯ ವೈವಿಧ್ಯವನ್ನು ಹೋಲಿಸುತ್ತಾ, ವಿಮರ್ಶಿಸುತ್ತಾ ಸಾಗಿದರೆ ನಂಬಲಾರದ ಅದೆಷ್ಟೋ ಸತ್ಯಗಳು ಕಣ್ಮುಂದೆ ಮತ್ತೊಂದು ಇತಿಹಾಸ ಸೃಷ್ಟಿಸುತ್ತಾ ಸಾಗುತ್ತವೆ ಎಂದು ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣ ಪ್ರಸಾದ್ ರವರು ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಉಪನ್ಯಾಸ ಮಾಲಿಕೆಯಲ್ಲಿ ಭಾರತ ದರ್ಶನ ಎಂಬ ವಿಷಯವಾಗಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪನ್ಯಾಸಕರಾದ ಸೂರ್ಯನಾರಾಯಣ ಸ್ವಾಗತಿಸಿ, ಶ್ರೀಮತಿ ದೀಕ್ಷ ವಂದಿಸಿದರು.