ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆ

ಪ್ರಜಾರಕ್ಷಕ ಹಿಂದೂ ಸಾಮ್ರಾಟ ರಾಷ್ಟ್ರಪ್ರೇಮಿ ಶಿವಾಜಿ ಮಹಾರಾಜರು ತಾಯಿ ಹೇಳುವ ಪೌರಾಣಿಕ ವೀರಾವೇಶದ ಕಥೆಯನ್ನು ಕೇಳುತ್ತಾ ಬೆಳೆದ ಧೀರ. ಅಪ್ರತಿಮ ನೀತಿ ತೇಜಸ್ಸಿನಿಂದ ಬೆಳಗುತ್ತಿದ್ದ ವ್ಯಕ್ತಿತ್ವ ಅವರದು.ಯಾವ ಕಾಲದಲ್ಲಿ ನಮ್ಮ ಧರ್ಮ ಸಂಸ್ಕೃತಿಗಳು ಹೇಳ ಹೆಸರಿಲ್ಲದಂತೆ ತೊಡೆದು ಹೋಗುತ್ತಿದ್ದವೋ, ನಮ್ಮ ಜನಾಂಗಕ್ಕೆ ಜನಾಂಗವೇ ವಿನಾಶದ ಮಡುವಿನಲ್ಲಿ ಮುಳುಗಿ ಹೋಗುತ್ತಿದಿತೋ ಅಂತಹ ವಿಷಗಳಿಗೆಯಲ್ಲಿ ನಮ್ಮ ಧರ್ಮವನ್ನೂ ಸಮಾಜವನ್ನೂ ಉದ್ಧಾರ ಮಾಡಿದ ಮಹಾನ್ ರಾಷ್ಟ್ರ ಪುರುಷ ಶಿವಾಜಿ ಮಹಾರಾಜರು. ಅಧರ್ಮವನ್ನು ಅಳಿಸಿ ಧರ್ಮರಾಜ್ಯ ಸ್ಥಾಪಿಸಿದ ಭಾರತದ ಆತ್ಮಚೇತನದ ಮೂರ್ತರೂಪವೇ ಅವರು. ಶಿವಾಜಿ ಸ್ವಶಕ್ತಿಯಿಂದ ಹಿಂದೂ ಸಾಮ್ರಾಜ್ಯಕ್ಕೆ, ಅಭೀಷಕ್ತನಾದ ದಿನ, ಶ್ರೇಷ್ಟ ಶುದ್ಧ ತ್ರಯೋದಶಿಯನ್ನು ರಾಷ್ಟ್ರಕ್ಕೆ ಪರ್ವದಿನವಾಗಿ, ಹಿಂದೂ ಸಾಮ್ರಾಜ್ಯ ದಿನೋತ್ಸವವಾಗಿ, ರಾಷ್ಟ್ರಜಾಗರಣ ಮಹೋತ್ಸವವಾಗಿ ಆಚರಿಸಲಾಗುತ್ತದೆ ಎಂದು ಓಂಕಾರ ಯೋಗ ಕೇಂದ್ರದ ಮುಖ್ಯಸ್ಥರಾದ ಕರುಣಾಕರ ಉಪಾಧ್ಯಾಯ ಅವರು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನ ಭಾಗ್ ಸ್ವಾಗತಿಸಿ ಈ ಕಾರ್‍ಯಕ್ರಮದ ಕುರಿತಾಗಿ ಮಾತನಾಡುತ್ತಾ ಶಿವಾಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶಕಟ್ಟುವ ಕಾರ್‍ಯದಲ್ಲಿ ತೊಡಗಿಸಿಕೊಳ್ಳಲು ಸಮರ್ಥರಾಗಬೇಕು ಎಂದು ಹೇಳಿದರು. ಉಪನ್ಯಾಸಕರಾದ ಸೂರ್‍ಯನಾರಾಯಣ ವಂದಿಸಿದರು. ಕಾರ್‍ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳೂ ಭಾಗವಹಿಸಿದ್ದರು.