ವಿವೇಕಾನಂದ ವಿದ್ಯಾವರ್ಧಕ ಸಂಘದ 57ನೇ ಸಂಸ್ಥೆ ನರೇಂದ್ರ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ

ವಿವೇಕಾನಂದ ವಿದ್ಯಾವರ್ಧಕ ಸಂಘದ 57ನೇ ಸಂಸ್ಥೆಯಾಗಿ 2017-18 ರ ಸಾಲಿನಲ್ಲಿ ತೆಂಕಿಲದಲ್ಲಿ ಲೋಕಾರ್ಪಣೆಗೊಂಡ ನರೇಂದ್ರ ಪದವಿ ಪೂರ್ವ ಕಾಲೇಜು ಪ್ರಸ್ತುತ 2019-20ನೇ ಸಾಲಿನ ಚಟುವಟಿಕೆಗಳಿಗೆ 4 ಅಂತಸ್ತಿನ ಕಟ್ಟಡಕ್ಕೆ ಸಂಬಂಧಿಸಿ ಸಿದ್ಧಗೊಂಡಿರುವ ನೂತನ ಕಟ್ಟಡದ ನೆಲ ಅಂತಸ್ತಿನ ಉದ್ಘಾಟನಾ ಸಮಾರಂಭ ಏಪ್ರಿಲ್ 6 ರಂದು ನಡೆಯಿತು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಎನ್. ವಿನಯ ಹೆಗ್ಡೆಯವರು ನೂತನ ಕಟ್ಟಡವನ್ನು ಉದ್ಘಾಟಿಸಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಪ್ರತಿಷ್ಠಿತ ಸಂಸ್ಥೆ ಬಿಟ್ಸ್ ಪಿಲಾನಿಯ ನಿರ್ದೇಶಕ ಪ್ರೊ. ರಘುರಾಮ ಜಿ ರವರು ಮಾತನಾಡಿ ಶಿಕ್ಷಣದಲ್ಲಿ ಜಿಜ್ಞಾಸೆ ಇರಬೇಕು. ಆಗ ವಿದ್ಯಾರ್ಥಿ ಉತ್ತುಂಗಕ್ಕೆ ಏರುತ್ತಾನೆ. ಅದೇ ರೀತಿ ಜ್ಞಾನವನ್ನು ವಿಮರ್ಶಿಸಿ ತಿಳಿದುಕೊಳ್ಳುವುದು ವಿದ್ಯಾರ್ಥಿಯ ಕರ್ತವ್ಯ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕರವರು ಮಾತನಾಡಿ, ಸಾವಿರಾರು ವರ್ಷಗಳಿಂದಲೂ ಆಕ್ರಮಣವಾದರೂ ಈ ದೇಶದಲ್ಲಿ ನಾವು ಬದುಕಿ ಬರಬೇಕಾದರೆ ನಮ್ಮಲ್ಲಿನ ಸತ್ವ ಕಾರಣ. ನಮ್ಮ ರಾಷ್ಟ್ರೀಯ ಚಿಂತನೆಗಳು ಹೊರಟು ಹೋಗಿದೆ. ಅದನ್ನು ಪುನರ್ ಪ್ರತಿಷ್ಠಾಪಿಸುವ ಕೆಲಸ ಒಂದು ಹಂತದಲ್ಲಿ ವಿವೇಕಾನಂದರು ಮಾಡಿದ್ದಾರೆ ಎಂದು ಹೇಳಿದರು. ಸಭಾ ಕಾರ್ಯಕ್ರಮದಲ್ಲಿ ಪ್ರೊ ಕಬಡ್ಡಿ ಆಟಗಾರರಾದ ಪ್ರಶಾಂತ್ ರೈ ಕೈಕಾರ, ಸುಕೇಶ್ ಹೆಗ್ಡೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್, ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ರೂಪಲೇಖ ಮತ್ತು ಸಂಚಾಲಕರಾದ ವಿಜಯ ಕೃಷ್ಣ ಭಟ್ ಮತ್ತಿತ್ತರು ಉಪಸ್ಥಿತರಿದ್ದರು.